ಊರೆಕಟ್ಟು

	ಸೇತುವೆಯ ಕಮಾನು, ಗುಮ್ಮಟ, ಪ್ರಬಲಿತಕಾಂಕ್ರೀಟಿನ ತೊಲೆಗಳು, ಚಪ್ಪಡಿಗಳು, ಗೋಡೆಗಳು, ತೊಟ್ಟಿಗಳು- ಮೊದಲಾದ ಕಟ್ಟಡಗಳನ್ನು ಕಟ್ಟುವಾಗ ಅವುಗಳಿಗೆ ತಾತ್ಕಾಲಿಕ ಆಧಾರವಾಗಿ ಉಪಯೋಗಿಸುವ ಮರದ ಅಥವಾ ಉಕ್ಕಿನ ಚೌಕಟ್ಟು (ಸೆಂಟ್ರಿಂಗ್). ಸಣ್ಣ ಕೆಲಸಗಳಿಗೆ ಕೊಡುವ ಆಧಾರಗಳನ್ನು ಕಾಲಾವಧಿ ಎಂದು ಕರೆಯುತ್ತಾರೆ.

	ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಲ್ಲಿನ ಕಂಬಗಳ ನಡುವೆ 9ಮೀ ಕಣ್ಣಿನ (ಸ್ಪ್ಯಾನ್) ನಯವಾದ ಕಲ್ಲಿನ ವೃತ್ತ ಖಂಡಾಕೃತಿಯ (ಸೆಗ್ಮೆಂಟಲ್) 21 ಕಮಾನುಗಳನ್ನು ಕಟ್ಟಿದಾಗ (1936) ಮರದ ಊರೆಕಟ್ಟುಗಳನ್ನು ಉಪಯೋಗಿಸಲಾಯಿತು. ಕಮಾನಿನ ಮಧ್ಯದಲ್ಲಿ ಎತ್ತರ ಕಂಬದಿಂದ ಅದು ಚಿಮ್ಮುವ ಮಟ್ಟದಿಂದ 2ಮೀ ಕಲ್ಲಿನ ಮಂದ 1ಮೀ. ಈ ಊರೆಕಟ್ಟಿನ ರಚನೆ ಹೀಗಿದೆ : ಹೊಳೆಯ ತಳದ ಮೇಲೆ ಅಷ್ಟು ಎತ್ತರದಲ್ಲಿ ಅಂತರಾಳದಲ್ಲಿ ಕಮಾನುಗಳನ್ನು ಕಟ್ಟಬೇಕು. ಅದಕ್ಕಾಗಿ ಸಂಪೂರ್ಣವಾದ ಕಮಾನಿನ ಕಲ್ಲುಗಳ ಮತ್ತು ಕೆಲಸದ ಜನರ ಭಾರವನ್ನು ತಾತ್ಕಾಲಿಕವಾಗಿ ಹೊರುವ ಮರದ ಆಸರೆಕಟ್ಟುಗಳನ್ನು (ಟ್ರಸಸ್) 2ಮೀ ಅಂತರದಲ್ಲಿ ನಿಲ್ಲಿಸಬೇಕು. ಕಂಬಗಳ ಪಕ್ಕಗಳಲ್ಲಿ ಇದೇ ಅಂತರದಲ್ಲಿ ಹೊರಕ್ಕೆ ಚಾಚುವ ಕಲ್ಲುಗಳ ಮೇಲೆ 0.30ಮೀ ಅಗಲ 203.2ಮಿಮೀ ಮಂದವಾದ ಒಂದೇ ಮರವನ್ನು ಎಳೆದು ಅದರ ಮೇಲೆ ಮರಳಿನಿಂದ ತುಂಬಿದ ವಿಶಿಷ್ಟವಾದ ತಾಂಡವಾಳದ ಗುಂಡಾದ ಪೆಟ್ಟಿಗೆಗಳನ್ನಿಟ್ಟು ಅವುಗಳ ಮೇಲೆ ಎತ್ತುಯಂತ್ರದ (ಡೆರಿಕ್) ಮೂಲಕ ಆಸರೆಕಟ್ಟನ್ನು ಜಾಗರೂಕವಾಗಿ ಎತ್ತಿ ಲಂಬವಾಗಿ ಮರಗಳಿಂದ ಬಿಗಿದು ನಿಲ್ಲಿಸುತ್ತಾರೆ. ಎರಡು ಆಸರೆಕಟ್ಟುಗಳ ನಡುವೆ ಮರದ ತುಂಡುಗಳನ್ನು (ಲ್ಯಾಗಿಂಗ್ಸ್) ಮೇಲಿನ ಅಂಚಿನಲ್ಲಿ ಹಲ್ಲು ಹಲ್ಲಾಗಿ ಕಾಣುವ ಅವಕ್ಕಾಗಿ ಮಾಡಿದ ಜಾಗದಲ್ಲಿ ಕೂರಿಸುತ್ತಾರೆ. ಇಷ್ಟು ಪೂರ್ವಭಾವಿಯಾದ ಕೆಲಸಕ್ಕೆ ಆಸರೆಕಟ್ಟು (ನೋಡಿ- ಆಸರೆಕಟ್ಟು) ಎನ್ನುತ್ತಾರೆ. ಅದರ ಮೇಲೆ ಚಿಮ್ಮುವ ಮಟ್ಟದಿಂದ ವರಸೆಗಳಲ್ಲಿ ಸುರ್ಕಿಗಾರೆಯಿಂದ ಕೂರಿಸಿ ಕಮಾನಿನ ನೆತ್ತಿಗೆ ಬಂದ ಮೇಲೆ ನಡುಕಲ್ಲಿನ ವರಸೆಯನ್ನು (ಕೀಸ್ಟೋನ್) ದಪ್ಪವಾದ ಹುಣಸೆ ಮರದ ದಿಮ್ಮಿಗಳಿಂದ ಬಿಡಿಸಿ ಬಿಗಿಯಾಗಿ ಕೂರಿಸುತ್ತಾರೆ. ಮೂರನೆಯ ದಿವಸ ಮರಳಿನ ಪೆಟ್ಟಿಗೆಯಿಂದ ಮರಳನ್ನು ಕೆದಕಿ ಹೊರಕ್ಕೆ ತೆಗೆದರೆ ಆಸರೆಕಟ್ಟು ಕಮಾನನ್ನು ಬಿಟ್ಟು ಕೊಂಚ ಕೆಳಕ್ಕೆ ಇಳಿಯುತ್ತದೆ. ಅದನ್ನು ಇಳಿಸಿ ಮುಂದಿನ ಕಮಾನಿಗೆ ಸಾಗಿಸುತ್ತಾರೆ.

	ಸೇತುವೆಯ ಮೇಲೆ ವಾಹನಗಳ ಮತ್ತು ಜನರ ಸಂಚಾರವಿದ್ದರೆ ನೀರಾವರಿಯ ನಾಲೆ ಹೊಳೆಯನ್ನು ದಾಟುವಾಗ ಕಟ್ಟಡದ ಮೇಲುಗಾಲುವೆಯಲ್ಲಿ (ಆಕ್ವಿಡಕ್ಟ್) ನೀರು ಹರಿಯುತ್ತದೆ. ನೀರಾವರಿಯ ಕೆಲಸಗಳಲ್ಲಿ ಕಮಾನುಗಳನ್ನು ಕಟ್ಟುವಾಗ ಆಸರೆ ಕಟ್ಟುಗಳನ್ನು ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ. ಹೊಳೆಯ ತಳದಿಂದ ಬಲವಾದ ಮರದ ಕಂಬಗಳನ್ನು ನಿಲ್ಲಿಸಿ ಮೇಲುಗಡೆ ಮರದ ತುಂಡುಗಳನ್ನು ಮಟ್ಟವಾಗಿ ಎಳೆದು, ಹಗ್ಗಗಳಿಂದ ಕಟ್ಟಿ ಅದರ ಮೇಲೆ ಮಣ್ಣನ್ನು ತುಂಬಿ ಮೇಲುಭಾಗವನ್ನು ಕಮಾನಿನ ಒಳಭಾಗಕ್ಕೆ (ಇಂಟ್ರಡಾರ್) ಸರಿಯಾಗಿ ಗಾರೆಯಿಂದ ನಯವಾಗಿ ಮಾಡಿ ಅದರ ಮೇಲೆ ಮೊದಲೇ ತಯಾರಿಸಿದ ಕಮಾನಿನ ಕಲ್ಲುಗಳಿಂದ ಕಮಾನನ್ನು ಎರಡು ಕಂಬಗಳ ಕಡೆಗಳಿಂದಲೂ ಕಟ್ಟಿ ಮಧ್ಯೆ ನಡುಕಲ್ಲಿನ ವರಸೆಯನ್ನು ಹುಣಸೇ ಮರದ ದಿಮ್ಮಿಗಳಿಂದ ಬಡಿದು ಪ್ರಬಲಿತವಾಗಿ ಕೂರಿಸುತ್ತಾರೆ.

	ಗುಮ್ಮಟಗಳನ್ನು (ಡೋಮ್ಸ್) ಕಟ್ಟುವಾಗ ಸಾಮಾನ್ಯವಾಗಿ ಆಸರೆಕಟ್ಟನ್ನು ಉಪಯೋಗಿಸಲಾಗುವುದಿಲ್ಲ. ಮೈಸೂರು ನಗರದಲ್ಲಿ ಶ್ರೀ ಕೃಷ್ಣರಾಜ ಒಡೆಯರ ಕ್ಯಾನೊಪಿಯನ್ನು ಕೆಂಪು ಕಲ್ಲಿನಿಂದ ಕಟ್ಟಿದಾಗ (1946) ಕೆಳಗಡೆಯಿಂದ ಕಂಬಗಳ ಮಟ್ಟದವರೆಗೂ ದಿಂಡಿಗದ ಮರಗಳನ್ನು ನಿಲ್ಲಿಸಿ ಮೇಲುಗಡೆ ಮರಗಳನ್ನು ಮಟ್ಟವಾಗಿ ಎಳೆದು ಅದರ ಮೇಲೆ ಮಣ್ಣನ್ನು ತುಂಬಿ ಹೊರಭಾಗವನ್ನು ಗುಮ್ಮಟದ ಆಕಾರಕ್ಕೆ ಹೊಂದಿಸಿ ಗಾರೆಯಿಂದ ನಯ ಮಾಡಿ ಅದರ ಮೇಲೆ ಗುಮ್ಮಟದ ಕಲ್ಲುಗಳನ್ನು ಸಿಮೆಂಟಿನ ಗಾರೆಯಲ್ಲಿ ಕೂರಿಸಿ ಕೆಲವು ದಿನಗಳವರೆಗೆ ಬಿಟ್ಟು ಆಮೇಲೆ ಕೆಳಗಿನ ಆಧಾರವನ್ನು ತೆಗೆದಿದ್ದಾರೆ.

	ಪ್ರಬಲಿತ ಕಾಂಕ್ರೀಟಿನ ಕಟ್ಟಡಗಳಿಗೆಲ್ಲ ವಿಶಿಷ್ಟವಾದ ಕಾಲಾವಧಿ ಬೇಕಾಗುತ್ತದೆ. ಮನೆಗಳಲ್ಲಿ ಮಾಡುಗಳನ್ನು ಕಟ್ಟುವಾಗ ನೆಲದ ಮೇಲೆ ಸರಿಯಾದ ಎತ್ತರಕ್ಕೆ ಮರದ ಗುಂಡುಗಂಬಗಳನ್ನು ನಿಲ್ಲಿಸಿ ಅವುಗಳ ಮೇಲೆ ಮಟ್ಟವಾಗಿ ನಯವಾದ ಮರದ ಹಲಗೆಗಳನ್ನು ಎಳೆಯುತ್ತಾರೆ. ಹಲಗೆಗಳ ಮೇಲೆ ಸಂಧಾನಕ್ಕೆ ತಕ್ಕಂತೆ ಉಕ್ಕಿನ ಕಂಬಿಗಳನ್ನು ಬಗ್ಗಿಸಿ ಜೋಡಿಸಿ ಬಿಗಿದು, ಅದರ ಮೇಲೆ ಒಂದೇ ದಿನ ಸಿಮೆಂಟ್ ಕಾಂಕ್ರೀಟನ್ನು ಬೇಕಾದ ಮಟ್ಟಕ್ಕೆ ತುಂಬುತ್ತಾರೆ. ಕಾಲಾವಧಿಯನ್ನು 10 ದಿವಸಗಳಿಂದ ಎರಡು ವಾರಗಳವರೆಗೆ ಕಾಂಕ್ರೀಟ್ ಗಟ್ಟಿಯಾಗುವವರೆಗೂ ಬಿಟ್ಟು ಆಮೇಲೆ ತೆಗೆದುಹಾಕುತ್ತಾರೆ. ಈಚೆಗೆ ಮರದ ಹಲಗೆಗಳಿಗೆ ಬದಲಾಗಿ ಮತ್ತೆ ಮತ್ತೆ ಬಳಸಬಹುದಾದ ಉಕ್ಕಿನ ತಗಡುಗಳನ್ನು ದೊಡ್ಡ ಕಟ್ಟಡಗಳಲ್ಲಿ ಉಪಯೋಗಿಸುತ್ತಾರೆ.

	ನಗರಗಳಿಗೆ ನೀರಿನ ಸರಬರಾಜಿಗಾಗಿ ತಣಿಸುವ ಕೊಳಗಳ (ಸೆಟ್ಲಿಂಗ್ ಟ್ಯಾಂಕ್ಸ್) ಮತ್ತು ಸೋಸಕಗಳ (ಫಿಲ್ಟರ್ಸ್) ಗೋಡೆಗಳನ್ನು ಸಾಮಾನ್ಯವಾಗಿ ಪ್ರಬಲಿತ ಕಾಂಕ್ರೀಟಿನಿಂದ ಕಟ್ಟುತ್ತಾರೆ. ಆಗ ಗೋಡೆಯ ಎರಡು ಪಕ್ಕಗಳಲ್ಲೂ ಹೊರಗಡೆ ನಯವಾದ ಮರದ ಹಲಗೆಗಳನ್ನು ನಿಲ್ಲಿಸಿ ಅಡ್ಡಪಟ್ಟಿಗಳಿಂದ ಪ್ರಬಲಿತಪಡಿಸಿ ಒಳಗಡೆ ಕಾಂಕ್ರೀಟನ್ನು ತುಂಬುವಾಗ ಹಲಗೆಗಳು ಕೊಂಚವೂ ಕದಲದ ಹಾಗೆ ಹಿಂದುಗಡೆಯಿಂದ ಬಲವಾದ ಊರೆಗಳನ್ನು ಕೊಡುತ್ತಾರೆ.

	ನಗರಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಅಲ್ಲಲ್ಲಿ ಶೇಖರಿಸಿಡುವ ಪ್ರಬಲಿತ ಕಾಂಕ್ರೀಟಿನ ಗುಂಡನೆಯ ಕೊಳಗಳನ್ನು ಸೂಕ್ತವಾದ ಅಡಿಪಾಯದ ಮೇಲೆ ಕಟ್ಟುತ್ತಾರೆ. ಆ ಎತ್ತರದ ಮೇಲೆ ವರ್ತುಲಾಕಾರದ ಕೊಳಗಳಿಗಾಗಿ ಕಟ್ಟುವ ಆಧಾರ ತಾತ್ಕಾಲಿಕವಾದರೂ ಒಳಗಡೆ ಉಕ್ಕನ್ನು ಜೋಡಿಸಿ ಕಾಂಕ್ರೀಟನ್ನು ತುಂಬುವಾಗ ಆಕಾರ ಕೊಂಚವೂ ಕೆಡದ ಹಾಗೆ ಮಾಡುವುದು ಸುಲಭವಲ್ಲ. ಇಂಥ ಕೆಲಸಗಳಲ್ಲಿ ಕಾಲಾವಧಿಗಳನ್ನು ಕಟ್ಟುವುದೇ ಒಂದು ಪ್ರಮುಖ ಕೆಲಸ.			  
(ಎಚ್.ಸಿ.ಕೆ.)
(ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ